ಬಿಡುಕ ಮೀನು - 
ಟೆಟ್ರಡಾಂಟಿಫಾರ್ಮೀಸ್ ಗಣದ ಬ್ಯಾಲಿಸ್ಟಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ಮೀನು (ಟ್ರಿಗರ್ ಫಿಶ್). ಅರಮೀನು (ಫೈಲ್ ಫಿಶ್) ಪರ್ಯಾಯ ನಾಮ. ಬ್ಯಾಲಿಸ್ಟಸ್ ಜಾತಿಗೆ ಸೇರಿದ ಸುಮಾರು 35 ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಅಟ್ಲಾಂಟಿಕ್ ಸಾಗರದಲ್ಲಿ ಬ್ಯಾ. ಮ್ಯಾಕ್ಯುಲೇಟಸ್ ಮತ್ತು ಬ್ಯಾ. ಕ್ಯಾಪ್ರಿಸೆನ್ಸ್ ಪ್ರಭೇದಗಳೂ ಭಾರತದ ಪೂರ್ವಕರಾವಳಿಯಲ್ಲಿ ಬ್ಯಾಸ್ಟೆಲೀಟಸ್ ಪ್ರಭೇದವೂ ಕಾಣದೊರೆಯುವುವು.

ಭಾರತದ ಬಿಡುಕ ಮೀನು ಸುಮಾರು 60 ಸೆಂಮೀ ಉದ್ದ ಬೆಳೆಯುತ್ತದೆ. ದೇಹ ಆಲಿವ್ ಹಸುರು ಮಿಶ್ರಿತ ಬೂದು ಬಣ್ಣದ್ದು. ಉದರ ಭಾಗ ಬಿಳಿ, ದೇಹದ ಎಡಬಲ ಪಕ್ಕಗಳಲ್ಲಿ ತಿಳಿಹಸುರು ಬಣ್ಣದ ಪಟ್ಟೆಗಳು, ಮಚ್ಚೆಗಳು ಉಂಟು. ಮೈಮೇಲೆ ಎಲುಬಿನಂಥ ಹುರುಪೆಗಳ ಕವಚವಿದೆ. ಬೆನ್ನಿನ ಈಜುರೆಕ್ಕೆಯಲ್ಲಿ ಮೂರು ಮೊನಚುಮುಳ್ಳುಗಳುಂಟು. ಪ್ರತಿ ದವಡೆಯಲ್ಲಿ ಬಲವಾದ, ಬಾಚಿಯಂಥ ಎಂಟು ಹಲ್ಲುಗಳಿವೆಯಾಗಿ ಈ ಮೀನು ತನ್ನ ಸಹಜ ಆಹಾರವಾದ ಇಚ್ಚಿಪ್ಪು ಪ್ರಾಣಿಗಳ ಚಿಪ್ಪನ್ನು ಸುಲಭವಾಗಿ ಮುರಿಯಬಲ್ಲುದು. ಇದು ಮುತ್ತಿನ ಚಿಪ್ಪು ಪ್ರಾಣಿಗಳಿಗೆ ಪೀಡಕಜೀವಿಯೆನಿಸಿದೆ.
(ನೋಡಿ- ಅರಮೀನು)
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ